ಎಲೆಕ್ಟ್ರೊ ಟೈಪುಗಳು: ಮುದ್ರಣ ಕ್ರಿಯೆಯಲ್ಲಿ ಅನುಸರಿಸುವ ಒಂದು ವಿಧಾನ, ತತ್ತ್ವಶಃ ಎಲೆಕ್ಟ್ರೊಟೈಪುಗಳು ಒಂದು ಮೂಲ ಲಿಪಿ ಮುದ್ರಣ (ಲೆಟರ್ ಪ್ರೆಸ್__ಅಕ್ಷರಗಳ ಮೂಳೆಗಳನ್ನು ಜೋಡಿಸಿ ಉಬ್ಬಿರುವ ಭಾಗಗಳಿಗೆ ಮಸಿ ಲೇಪಿಸಿ ಮುದ್ರಿಸುವ ಸಾಂಪ್ರದಾಯಿಕ ವಿಧಾನವೇ ಲಿಪಿ ಮುದ್ರಣ). ಮುದ್ರಣ ಅಚ್ಚಿನ ಹಲಗೆಯಿಂದ ಪಡೆದ ಎರಕದ ಅಚ್ಚಿನ (ಮೌಲ್ಡ್‌) ಮೇಲೆ ವಿದ್ಯುಚ್ಛಕ್ತಿಯ ಸಹಾಯದಿಂದ ಶೇಖರಿಸಲ್ಪಟ್ಟ ತಾಮ್ರದ ಚಿಪ್ಪುಗಳೇ ಎಲೆಕ್ಟ್ರೊ ಟೈಪುಗಳು. ಮುದ್ರಣ ಫಲಕಗಳ ಪ್ರತಿರೂಪಗಳ (ಡ್ಯೂಪ್ಲಿಕೇಟ್ ಪ್ಲೇಟ್ಸ್‌) ತಯಾರಿಕೆಯಲ್ಲಿ ಸ್ಟೀರಿಯೊ ಫಲಕಗಳು ಮೊದಲನೆಯ ವಿಧಾನವಾದರೆ ಎಲೆಕ್ಟ್ರೊ ಟೈಪುಗಳು ಎರಡನೆಯ ವಿಧಾನ. ಇದು ಸ್ಟೀರಿಯೊ ಟೈಪ್ ವಿಧಾನಕ್ಕಿಂತಲೂ ಹೆಚ್ಚು ನಿಧಾನವಾದ ಮತ್ತು ಹೆಚ್ಚು ವೆಚ್ಚದ ವಿಧಾನ. ಆದರೆ ತುಂಬ ಉತ್ತಮ ವರ್ಗದ ಫಲಕಗಳ ಪ್ರತಿರೂಪಗಳನ್ನು ಇದು ನೀಡುತ್ತದೆ. ಎಲೆಕ್ಟ್ರೊಟೈಪ್ಗಳು ಬಹಳ ಹೆಚ್ಚು ಪ್ರತಿಗಳನ್ನು ಕೊಡುತ್ತವಲ್ಲದೆ ಮುದ್ರಣದಲ್ಲಿ ಬಹು ಸೂಕ್ಷ್ಮ ವಿವರಗಳನ್ನು ಚೊಕ್ಕಟವಾಗಿ ಉತ್ಪಾದಿಸಬಲ್ಲವು. ಅಷ್ಟೇ ಅಲ್ಲದೆ, ಅತಿ ಸೂಕ್ಷ್ಮ ಹಾಫ್ಟೋನ್ ಬಿಂದುಗಳನ್ನೊಳಗೊಂಡ ಚಿತ್ರಗಳನ್ನೂ ಅಂದವಾಗಿ ಉತ್ಪಾದಿಸಬಲ್ಲವು.

ಎಲೆಕ್ಟ್ರೊ ಟೈಪುಗಳನ್ನು ತಯಾರಿಸುವ ವಿಧಾನವನ್ನು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಬಹುದು: 1 ಎರಕದ ಅಚ್ಚು (ಮೌಲ್ಡ್‌) ಮಾಡುವುದು; 2 ವಿದ್ಯುಲ್ಲೇಪಿತ ಲೋಹವನ್ನು ಎರಕದ ಅಚ್ಚಿನ ಮೇಲೆ ಕ್ರೋಡೀಕರಿಸುವುದು; 3 ಲೋಹದ ಚಿಪ್ಪಿನ ಹಿಂಬದಿಯ ನಿರ್ಮಾಣ ಮತ್ತು ಒಪ್ಪ ಮಾಡುವುದು.
ವಿದ್ಯುತ್ ಎರಕದ ಅಚ್ಚು: ಅಚ್ಚು ಎರಕ ಮಾಡಲು ಮೂರು ಬಗೆಯ ಪದಾರ್ಥಗಳನ್ನು ಬಳಸುವರು:

1. ಉಷ್ಣಲೆಪ್ಪದ ಎರಕದ ಅಚ್ಚು (ಥರ್ಮೊಪ್ಲಾಸ್ಟಿಕ್ ಮೌಲ್ಡ್‌): ಮೂಲವಾದ ಲಿಪಿ ಮುದ್ರಣದ ಅಚ್ಚಿನ ಹಲಗೆಯನ್ನು ಎಚ್ಚರಿಕೆಯಿಂದ ತಯಾರಿಸಿ, ಅದಕ್ಕೆ ಎಣ್ಣೆಯನ್ನು ತೆಳುವಾಗಿ ಸವರಬೇಕು. ಹೈಡ್ರಾಲಿಕ್ ಪ್ರೆಸ್ಸಿನ ಕಾದ ಹಲಗೆಯ ಮೇಲೆ ಆ ಅಚ್ಚಿನ ಹಲಗೆಯನ್ನಿರಿಸಿ ಅದರ ಮೇಲೆ 0.076200 ಸೆಂಮೀ. ಗಾತ್ರದ ಉಷ್ಣಲೆಪದ ಹಾಳೆಯನ್ನು (ಪಿ.ವಿ.ಸಿ. ಕೊಪಾಲಿಮರ್) ಇಟ್ಟು 1200-1800 ಸೆಂ. ವರೆಗೆ ಕಾಯಿಸಿ ವೃತ್ತಪತ್ರಿಕೆಯ ಕಾಗದ ಅಥವಾ ಒಂದು ಬ್ಲಾಂಕೆಟನ್ನು ಅದರ ಮೇಲಿರಿಸಿ ಒತ್ತಡವನ್ನು ಕೊಡಬೇಕು. ಈ ಸಂಯೋಜನೆಯನ್ನು ಅನಂತರ ನೀರಿನಿಂದ ತಣ್ಣಗಾಗಿಸಿದ ನೀರೊತ್ತಡದ ಸಾಧನಕ್ಕೆ ವರ್ಗಾಯಿಸಿ ಅದನ್ನು ಒತ್ತಡದಲ್ಲಿ ಶೈತ್ಯಗೊಳಿಸಬೇಕು. ಉಷ್ಣಲೆಪ್ಪದ ಎರಕಗಳ ಸಾಮಗ್ರಿಗಳಿಂದ ಲಭಿಸುವ ಒಂದು ದೊಡ್ಡ ಅನುಕೂಲವೆಂದರೆ ಇದು ಉತ್ತಮಗುಣದ ಮುದ್ರಣವನ್ನು ಕೊಡುವುದು; ಮತ್ತು ಇದನ್ನು ಪುನಃ ಎರಕ ಮಾಡಲು ಉಪಯೋಗಿಸಬಹುದು. 

2. ಟೆನಪ್ರೇಟ್: ಉತ್ತಮ ಬಗೆಯ ರಬ್ಬರಿನ ಒಂದು ಅಂಟು ಪದಾರ್ಥದಿಂದ ಇದನ್ನು ಮಾಡಿದೆ. ಇದಕ್ಕೆ ಬಲು ತೆಳ್ಳನೆಯ 0.012700 ಸೆಂಮೀ.ಅಲ್ಯೂಮಿನಿಯಮ್ ಹಾಳೆಯ ಆಧಾರವನ್ನು ಹಿಂಬದಿಯಲ್ಲಿ ಕೊಟ್ಟಿದೆ. ಇದನ್ನು ಕೊಠಡಿಯ ಉಷ್ಣತೆಯಲ್ಲಿ ಅಚ್ಚಿನ ಹಲಗೆಯ ಮೇಲಿರಿಸಿ ಒಂದು ತೆಳುವಾದ ರಬ್ಬರ್ ಹಾಳೆಯ ಅಥವಾ ವೃತ್ತಪತ್ರಿಕೆಯ ಕಾಗದದ ಅಡಿಯಲ್ಲಿ ಹೈಡ್ರಾಲಿಕ್ ಪ್ರೆಸ್ಸಿನಲ್ಲಿ ಒತ್ತುವ ಮೂಲಕ ಬೇಕಾದ ಎರಕದ ಅಚ್ಚು ದೊರೆಯುವುದು.

3. ಸೀಸದ ಫಲಕ: ಅಚ್ಚಿನ ಹಲಗೆಯ ಮೇಲೆ 0.010116ಸೆಂಮೀ. ದಪ್ಪದ ಸೀಸದ ಫಲಕವನ್ನಿಟ್ಟು ಅದರ ಮೇಲೆ ಚದರ ಅಂಗುಲಕ್ಕೆ 3-5 ಟನ್ನುಗಳಷ್ಟು ಒತ್ತಡ ಉಂಟಾಗುವಂತೆ ಒತ್ತಬೇಕು. ಆಗ ಅದು ಸೀಸದ ಫಲಕದ ಒಂದು ಅಚ್ಚಾಗಿ ಪರಿಣಮಿಸುತ್ತದೆ. ಅದನ್ನು ಈಗ ನೇರವಾಗಿ ವಿದ್ಯುಲ್ಲೇಪಿತ ತೊಟ್ಟಿಗೆ ವರ್ಗಾಯಿಸ ಬಹುದು. ಮಿಕ್ಕೆರಡು ಸಂದರ್ಭಗಳಲ್ಲಿ ಎರಕದ ಅಚ್ಚಿನ ಮೇಲ್ಮೈ ವಿದ್ಯುದ್ವಾಹಕವಲ್ಲವಾದ ಕಾರಣ ಕೆಲವು ಸಿದ್ಧತೆಗಳಾಗಬೇಕು. ಸೀಸದ ಅಥವಾ ಇತರ ವಿದ್ಯುದ್ವಾಹಕ ಪಟ್ಟಿಗಳನ್ನು ಬಂಧಿಸಬೇಕು. ಅನಂತರ ಆ ಎರಕದ ಅಚ್ಚನ್ನು ಒಂದು ಶುದ್ಧಿಕಾರಕ ವಸ್ತುವಿನಿಂದ ಉಜ್ಜಿ ನೀರನಲ್ಲಿ ಜಾಲಾಡಿ ತೊಳೆಯಬೇಕು. ತರುವಾಯ ಸ್ಟ್ಯಾನಸ್ ಕ್ಲೋರೈಡ್ ದ್ರಾವಣದಲ್ಲಿ ಮುಳುಗಿಸಿ ಸೂಕ್ಷ್ಮಗೊಳಿಸಿ ಮತ್ತೆ ನೀರಿನಲ್ಲಿ ಜಾಲಾಡಿ ತೊಳೆದು ಅದರ ಮೇಲ್ಮೈಯ ಮೇಲೆ ಅಮೋನಿಯೇಟೆಡ್ ಸಿಲ್ವರ್ ನೈಟ್ರೇಟ್ದ್ರಾವಣವನ್ನು ಮತ್ತು ಒಂದು ಅಪಕರ್ಷಣಕಾರಿ ದ್ರಾವಣವನ್ನು (ಹೈಡ್ರೊಜನ್) ಎರಡು ಹೊಳ್ಳೆಗಳುಳ್ಳ ಸೀರ್ಪನಿ ಯಂತ್ರದ (ಸ್ಪ್ರೇಗನ್) ಸಹಾಯದಿಂದ ಸಿಂಪಡಿಸಬೇಕು. ಆಗ ಒಂದು ರಾಸಾಯನಿಕ ಲೇಪವಾಗಿ ಬೆಳ್ಳಿಯ ತೆಳುಪೊರೆ ಉಂಟಾಗುವುದು. ಅನಂತರದಲ್ಲಿ ಇದನ್ನು ವಿದ್ಯುಲೇಪನ ಮಾಡುವ ತೊಟ್ಟಿಗೆ ವರ್ಗಾಯಿಸಬಹುದು.

 ವಿದ್ಯುಲ್ಲೇಪನ (ಎಲೆಕ್ಟ್ರೊ ಡಿಪಾಸಿಷನ್) 
ಈ ಕಾರ್ಯವಿಧಾನದಲ್ಲಿ ಒಂದು ನಿಕ್ಕಲ್ ತೊಟ್ಟಿ, ಒಂದು ತಾಮ್ರದ ತೊಟ್ಟಿ, ಒಂದು ವಿದ್ಯುತ್ ಪರಿವರ್ತಕ ಅಥವಾ ಸಮಕಾರಕ ಮತ್ತು ಒಂದು ವಾಯುಸಂಮರ್ದಕ-ಇವಿಷ್ಟು ಸಲಕರಣೆಗಳು ಬೇಕಾಗುತ್ತವೆ. ವಿದ್ಯುಲ್ಲೇಪನಕ್ಕಾಗಿ ಎರಕದ ಅಚ್ಚನ್ನು ತೊಟ್ಟಿಯ ಋಣವಿದ್ಯುತ್ ಧ್ರುವಕ್ಕೆ (ಕ್ಯಾಥೋಡ್) ಬಂಧಿಸಬೇಕು. 0.0025400 ಸೆಂಮೀ.- 0.0038100 ಸೆಂಮೀ.ನಷ್ಟು ದಪ್ಪನಾದ ತಾಮ್ರದ ಲೇಪವನ್ನು ಪಡೆಯಲು 1ಳಿ-3 ಗಂಟೆಗಳ ವರೆಗೆ ಕಾಲಾವಕಾಶ ಬೇಕು. ನಿಕ್ಕಲಿನ ನೇರ ಕಾರ್ಯವಿಧಾನದಲ್ಲಿ ಮೊದಲು ನಿಕ್ಕಲ್ ಸಲ್ಫೇಟ್ ದ್ರಾವಣದ ತೊಟ್ಟಿಯಲ್ಲಿ ಎರಕದ ಅಚ್ಚನ್ನಿರಿಸಿ 0.0050800 ಸೆಂಮೀ.ನಷ್ಟು ದಪ್ಪನಾದ ನಿಕ್ಕಲ್ ಲೇಪವನ್ನು ಪಡೆಯಬೇಕು. ಅನಂತರದಲ್ಲಿ ತಾಮ್ರದ ವಿದ್ಯುಲ್ಲೇಪನಕ್ಕಾಗಿ ಕಾಪರ್ ಸಲ್ಫೇಟ್ ಮತ್ತು ಸಲ್ಫ್ಯೂರಿಕ್ ಆಮ್ಲಗಳ ದ್ರಾವಣದ ತೊಟ್ಟಿಯಲ್ಲಿರಿಸಬೇಕು. ವಿದ್ಯುಲ್ಲೇಪನ ಕಾರ್ಯವನ್ನು ಶೀಘ್ರಗೊಳಿಸಲು ದ್ರಾವಣವನ್ನು ಕಾಯಿಸಬೇಕು ಮತ್ತು ಸಂಮರ್ದಿತ ಗಾಳಿಯ ಸಹಾಯದಿಂದ ದ್ರಾವಣವನ್ನು ಸ್ವಲ್ಪಮಟ್ಟಿಗೆ ಕಲಕಬೇಕು. ಲೇಪನದಲ್ಲಿ ಎಷ್ಟು ಕಡಿಮೆ ವೋಲ್ಟೇಜನ್ನು ಉಪಯೋಗಿಸಿದರೆ ಅಷ್ಟು ಹಸನಾದ 

ತಾಮ್ರದ ಲೇಪ ದೊರೆಯುವುದು. ಸಾಮಾನ್ಯವಾಗಿ ಮೊದಲಲ್ಲಿ ಸೂಕ್ಷ್ಮವಾದ ಮತ್ತು ತೆಳುವಾದ ತಾಮ್ರದ ಲೇಪವನ್ನು ಕೊಟ್ಟು ಅನಂತರದಲ್ಲಿ ಅದರ ಮೇಲೆ ದಪ್ಪನಾದ ಲೇಪವನ್ನು ಕೊಡುವುದು ವಾಡಿಕೆ. ಈ ರೀತಿಯಲ್ಲಿ ಹೊಸದಾಗಿ ಲೇಪಿತವಾದ ತಾಮ್ರದ ಮೇಲ್ಮೈಯ ಉತ್ಕರ್ಷಣೆಯನ್ನು ತಡೆಯುವುದಕ್ಕಾಗಿ ಅದರ ಮೇಲೆ ವಿದ್ಯುತ್ತಿನ ಸಹಾಯದಿಂದ ಅತ್ಯಂತ ತೆಳುವಾದ ತವರದ ಲೇಪನ ಮಾಡಬೇಕು; ಅಥವಾ ಉಷ್ಣದ ಸಹಾಯದಿಂದ ತವರದ ತೆಳುವಾದ ರೇಖೆಯನ್ನು ಬೆಸುಗೆ ಮಾಡಬೇಕು. ಇದು ತಾಮ್ರದ ತೆಳು ಪೊರೆ ಮತ್ತು ಅದರ 

ಹೊರಮೈ ನಿರ್ಮಿಸುವ ಲೋಹಗಳ ಮಧ್ಯೆ ಒಳ್ಳೆ ಬಂಧಕವಾಗಿಯೂ ಪರಿಣಮಿಸುತ್ತದೆ. ಅನಂತರದಲ್ಲಿ ತಾಮ್ರದ ತೆಳು ಪೊರೆಯನ್ನು ಎರಕದ ಅಚ್ಚಿನಿಂದ ಬೇರ್ಪಡಿಸಿ ಸೀಸದ ಮಿಶ್ರಲೋಹವನ್ನು ಅದರ ಹೊರಮೈಗೆ ಹೊದಿಸಿ ಲೋಹದ ಹೊರಮೈಯುಳ್ಳ ವಿದ್ಯುತ್ ಅಚ್ಚು ಫಲಕವನ್ನು ಪಡೆಯಲಾಗುವುದು. ಈ ರೀತಿಯಲ್ಲಿ ಹೊದಿಸಿದ ಸೀಸದ ಹೊರಮೈ ತಾಮ್ರದ ಅಚ್ಚಿನ ವರೆಗೆ ಸದೃಢವಾದ ರಕ್ಷಣೆಯನ್ನು ಕೊಡುವುದಲ್ಲದೆ ಅದನ್ನು ತಟ್ಟಲು ಮತ್ತು ಪರಿಭ್ರಮಣ ರೀತ್ಯಬಾಗಿಸಲು ಅನುಕೂಲವಾಗುವಂತೆ ಮೃದುವಾಗಿಯೂ ಇರುತ್ತದೆ. ಸೀಸದ ಹೊರಮೈಹೊದಿಸಲು 1. ಓಪನ್ ಪ್ಯಾನ್, 2. ಪ್ರೆಶ್ಯರ್ ಕ್ಯಾಸ್ಟರ್, 3. ಕ್ಯಾಸ್ಟಿಂಗ್ಬಾಕ್ಸ್‌, 4. ಸೆಂಟ್ರಿಫ್ಯೂಗಲ್ ಕ್ಯಾಸ್ಟಿಂಗ್ (ರೋಟರಿ ಪ್ಲೇಟುಗಳಿಗಾಗಿ) _ಇವೇ ಮುಂತಾದ ಕಾರ್ಯವಿಧಾನಗಳು ಬಳಕೆಯಲ್ಲಿವೆ. 

ಲೋಹವನ್ನು ಹೊದಿಸಿದ ಎಲೆಕ್ಟ್ರೊಟೈಪುಗಳ ಮುದ್ರಣದ ಔನ್ನತ್ಯದಲ್ಲಿ (ಪ್ರಿಂಟಿಂಗ್ ಹೈಟ್) ವ್ಯತ್ಯಾಸಗಳಿರುವ ಸಂಭವವಿದೆಯಾದ್ದರಿಂದ ಅವನ್ನು ಸೂಕ್ತವಾಗಿ ತಟ್ಟಿ ಪರಿಷ್ಕರಿಸುವುದು ಆವಶ್ಯಕ. ಅಂಥ ವ್ಯತ್ಯಾಸಗಳನ್ನು-1. ಕೈಯಿಂದ ಅಥವಾ ಪ್ರೀಸ್ಲ್ಯಾಬಿಂಗ್ ಸಲಕರಣೆಗಳಿಂದ ಸಮಮಟ್ಟ ಮಾಡುವುದು, 2. ಒಪ್ಪ ಮಾಡಿದಾಗಿನ ಮಂದಕ್ಕಿಂತ 0.03" ಹೆಚ್ಚಾಗಿರುವಂತೆ ಪ್ರಥಮತಃ ಹಿಂಭಾಗವನ್ನು ಸಮಮಟ್ಟ ಮಾಡುವುದು, 3. ತಗ್ಗಾದ ಭಾಗಗಳನ್ನು ಪತ್ತೆಮಾಡಿ ಫಲಕದ ಹಿಂಬದಿಯಲ್ಲಿ ಗುರುತು ಮಾಡುವುದು, 4. ಅಂಥ ತಗ್ಗಾದ ಜಾಗಗಳನ್ನು ವಿಶೇಷ ತೆರದ ಬಡಿಗೆಯಿಂದ ಹಿಂಭಾಗದಿಂದ ತಟ್ಟಿ ಉನ್ನತಗೊಳಿಸುವುದು, 5. ಅಂತಿಮವಾಗಿ ಸರಿಯಾದ ವೃಂದಕ್ಕೆ ಸಮ ಮಟ್ಟಗೊಳಿಸಿ ಮೃದುವಾಗಿ ತಟ್ಟಿ ಒಪ್ಪ ಮಾಡುವುದು—ಇವೇ ಮುಂತಾದ ಕಾರ್ಯ ವಿಧಾನಗಳಿಂದ ಸರಿಪಡಿಸಲಾಗುವುದು.

ತಾಮ್ರದ ಪೊರೆಯ ಹಿಂಬದಿಯಲ್ಲಿ ಗೊತ್ತಾದ ಗಾತ್ರಕ್ಕೆ ಸೀಸದ ಮಿಶ್ರಲೋಹವನ್ನು ಹೊದಿಸಲು ವಿದ್ಯುಲ್ಲೇಪನ ಮಾಡುವುದೂ ರೂಢಿಯಲ್ಲಿದೆ. ಈ ಸಂದರ್ಭದಲ್ಲಿ ಫಲಕವನ್ನು ತಟ್ಟಿ ಸಮಮಟ್ಟಕ್ಕೆ ತರುವ ಆವಶ್ಯಕತೆ ಇಲ್ಲ. ಇಂಥ ಫಲಕದ ಹೆಸರು ಬ್ಲಾಕ್ಮೋರ್ ಫಲಕ.  ಕೆಲವು ವೇಳೆ ತಾಮ್ರದ ಚಿಪ್ಪಿನ ಹಿಂಬದಿಯಲ್ಲಿ ಒಂದು ಲೆಪ್ಪದ ಸಾಮಗ್ರಿಯನ್ನು ಹೊದಿಸಲಾಗುವುದು. ಲೆಪ್ಪ ಹೊದಿಸಿದ (ಪ್ಲಾಸ್ಟಿಕ್ ಬ್ಯಾಕ್ಡ್‌) ಎಲೆಕ್ಟ್ರೊಟೈಪುಗಳೆಂದು ಇವುಗಳ ಹೆಸರು. ಅಂಥ ಒಂದು ಉತ್ಪನ್ನವನ್ನು ಕಾಲೇಜ್ ಎಲೆಕ್ಟ್ರೊಟೈಪು ಎಂದು ಕರೆಯುತ್ತಾರೆ. ಈ 
ವಿಧಾನದಲ್ಲೂ ಮಾಮೂಲು ವಿಧಾನವನ್ನನುಸರಿಸಿ ತಯಾರಿಸಿದ ತಾಮ್ರದ ಪೊರೆಯನ್ನೇ ಉಪಯೋಗಿಸುತ್ತಾರೆ. ಅದರ ಹಿಂಬದಿಯಲ್ಲಿ ಬಲವಾಗಿ ಅಂಟುವಂತೆ ಮಾಡುವುದಕ್ಕಾಗಿ- 1. ಒಂದು ಒರಟಾದ ತಾಮ್ರದ ವಿದ್ಯುಲ್ಲೇಪನ ಅಥವಾ 2. ಉತ್ಕರ್ಷಣ ಅಥವಾ 3. 

ತವರದ ವಿದ್ಯುಲ್ಲೇಪನ-ಮಾಡಲಾಗುವುದು. ಎರಕದ ಅಚ್ಚಿಗೆ ಇನ್ನೂ ಅಂಟಿರುವ ತಾಮ್ರದ ಪೊರೆಯನ್ನು ಒಣಗಿಸಿ ಒಂದು ನಿರ್ವಾತ ಪೀಠದ (ವ್ಯಾಕ್ಯೂಮೇಟೆಡ್) ಮೇಲೆ ವೃತ್ತ ಪತ್ರಿಕೆಯ ಕಾಗದದ ಒಂದು ಹಾಳೆಗೆ ಅಂಟಿಸಿಡಬೇಕು (ಟೇಪ್ಡ್‌). ಕಲೆಸಿದಾಗ ವೇಗವಾಗಿ ಗಡಸಾಗುವ ಗುಣವುಳ್ಳ ಎರಡು ರಾಳಗಳನ್ನು ಒಂದು ಗೊತ್ತಾದ ಪ್ರಮಾಣದಲ್ಲಿ ಮಿಶ್ರಣಮಾಡಿ ತಾಮ್ರದ ಫಲಕದ ಹಿಂಬದಿಯಲ್ಲಿ ಸವರಿ ಅಂಚುಗಳಲ್ಲಿರಿಸಿರುವ ಅಳತೆ ಕಡ್ಡಿಗಳ ಮಟ್ಟಕ್ಕೆ ಸರಿಯಾಗಿ ಸಮ ಮಟ್ಟಗೊಳಿಸಬೇಕು. ಅನಂತರದಲ್ಲಿ ನಿರ್ವಾತತೆಯನ್ನು ಸಡಿಲಿಸಿ ಫಲಕವನ್ನು ಪೀಠದಿಂದಿಳಿಸಿ ಒಣಗುವುದಕ್ಕೆ ಇಡಬೇಕು. ಮಿತವಾದ ಉಷ್ಣತೆಯಲ್ಲಿ ಇದು ಒಣಗಲು 1-2 ಗಂಟೆಗಳ ಕಾಲ ಬೇಕಾಗುವುದು, ಅನಂತರ ತಳದಲ್ಲಿರುವ ವೃತ್ತ ಪತ್ರಿಕೆಯ ಕಾಗದದ ಸಮೇತ ಒಂದು ಘಟ್ಟಿಸುವ (ಮಿಲ್ಲಿಂಗ್) ಯಂತ್ರದ ನಿರ್ವಾತ ಪೀಠಕ್ಕೆ ವರ್ಗಾಯಿಸಿ ಪ್ರಥಮವಾಗಿ ಒಂದು ತೆಳುವಾದ ಪದರವನ್ನು ಕತ್ತರಿಸಿ ತೆಗೆಯುವರು. ಇದಾದ ಅನಂತರ ಎರಕದ ಅಚ್ಚನ್ನು ಎಲೆಕ್ಟ್ರೊ ಫಲಕದಿಂದ ಬಾಗಿಸಿ ಬೇರ್ಪಡಿಸುವರು. ಆ ಮೇಲೆ ಸರಿಯಾದ ಗಾತ್ರಕ್ಕೆ ಮಿಲ್ಲಿಂಗ್ ಮಾಡುವರು. ಈ ಮುದ್ರಣ ಯಂತ್ರದಲ್ಲಿ ಫಲಕವನ್ನು ಸಮತಲವಾದ ಅಚ್ಚಿನ ಪೀಠವುಳ್ಳ (ಫ್ಲಾಟ್ ಬೆಡ್) ಮುದ್ರಣ ಯಂತ್ರದಲ್ಲಿ ಸಮತಲ ರೂಪದಲ್ಲಿಯಾಗಲಿ ಅಥವಾ ಒಂದು ಕಂಸದ ಆಕಾರಕ್ಕೆ ಸುಲಭವಾಗಿ ಬಗ್ಗಿಸಿ ರೋಟರಿ ಯಂತ್ರದ ಉರುಳೆಯ ಫಲಕವನ್ನಾಗಿಯಾಗಲಿ ಉಪಯೋಗಿಸಬಹುದು. ಮತ್ತೊಂದು ವಿಧಾನವೆಂದರೆ, ಒಂದು ಅಲ್ಯೂಮಿನಿಯಮ್ ರೇಕಿನ ಹಾಗೂ ಎರಕದ ಅಚ್ಚಿನಿಂದ ಬೇರ್ಪಡಿಸಿದ ತಾಮ್ರದ ಪೊರೆಯ ಮಧ್ಯೆ ಉಷ್ಣಲೆಪ್ಪದ ಅಥವಾ ಉಷ್ಣದಿಂದ ಹದವಾಗುವ ರಾಳಗಳನ್ನು ಹರಡಿ ಉಷ್ಣವನ್ನೊಡ್ಡಿ ಒತ್ತಡದಿಂದ ಅವನ್ನು ಅಂಟಿಸುವುದರಿಂದ ಉಂಟಾಗುವ 

ವಿದ್ಯುದಚ್ಚಿನ ಫಲಕಗಳು. ಇವನ್ನು ಲ್ಯಾಮಿನೇಟೆಡ್ ಪ್ಲಾಸ್ಟಿಕ್ ಎಲೆಕ್ಟ್ರೊ ಟೈಪುಗಳೆಂದು ಕರೆಯುತ್ತಾರೆ.		 			  (ಡಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ